ಬಾರ್ಬರಿ ಕೋತಿ	 - 
ಮ್ಯಾಮೇಲಿಯ ವರ್ಗದ ಪ್ರೈಮೇಟ್ ಗಣಕ್ಕೆ ಸೇರಿದ ಪ್ರಾಣಿ. ಮಕಾಕ ಸಿಲ್ವಾನಸ್ ಇದರ ಶಾಸ್ತ್ರೀಯ ಹೆಸರು. ಆಫ್ರಿಕದ ವಾಯವ್ಯ ಭಾಗದಲ್ಲಿ ಮುಖ್ಯವಾಗಿ ಜಿಬಾಲ್ಟರ್, ಮೊರಾಕ್ಕೊ, ಆಲ್ಜೀರಿಯಗಳಲ್ಲಿ ಹಾಗೂ ಯೂರೋಪ್ ಖಂಡದ ಕೆಲವು ಭಾಗಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಕಲ್ಲು ಬಂಡೆಗಳಿಂದ ಆವೃತವಾಗಿರುವ ಪರ್ವತ ಪ್ರದೇಶ ಇದರ ಮೆಚ್ಚಿನ ತಾಣ. ಬೃಹತ್ ಕೋತಿಗಳ ಗುಂಪಿಗೆ ಇದನ್ನು ಸೇರಿಸುತ್ತಾರಾದರೂ ವಾಸ್ತವವಾಗಿ ಇದು ಮಕಾಕ್ ಕೋತಿಗಳ ಗುಂಪಿಗೆ ಸೇರಿದೆ. ಲಕ್ಷಣಗಳಲ್ಲಿ ಇದು ಸಾಮಾನ್ಯ ಕೋತಿಗಳನ್ನು ಹೋಲುತ್ತದೆ; ಬಾಲಮಾತ್ರ ಬಹಳ ಚಿಕ್ಕದು. ಇದರ ಎತ್ತರ ಸುಮಾರು 75 ಸೆಂ.ಮೀ: ತೂಕ 5-6 ಕೆ.ಜಿ. ಮೈತುಂಬ ಕಂದು ಬಣ್ಣದ ಬಿರುಸಾದ ಕೂದಲುಗಳುಂಟು.

ಯೂರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ ಮಾತ್ರ ಇರುವ ಮಕಾಕ್ ಕೋತಿಗಳ ಪೈಕಿ ಇಂದು ಜೀವಂತವಾಗಿ ಕಾಣದೊರೆಯುವುದು ಇದೊಂದೇ. ಬಾರ್ಬರಿ ಕೋತಿಯನ್ನು ಬಿಟ್ಟು ಮಕಾಕ್ ಗುಂಪಿನ ಉಳಿದೆಲ್ಲ ಪ್ರಭೇದಗಳು ಈ ಪ್ರದೇಶಗಳಲ್ಲಿ ನಶಿಸಿಹೋಗಿ ಪಳಿಯುಳಿಕೆಗಳ ರೂಪದಲ್ಲಿ ಮಾತ್ರ ದೊರೆಯುತ್ತವೆ. ಇಂಥ ಪಳೆಯುಳಿಕೆಗಳು ಯುರೋಪ್ ಮತ್ತು ಆಫ್ರಿಕದ ಎಲ್ಲ ಭಾಗಗಳಲ್ಲಿ ಕಾಣ ದೊರೆಯುವುದರಿಂದ, ಬಾರ್ಬರಿ ಕೋತಿ ಹಾಗೂ ಅದರ ಪೂರ್ವಜ ಕೋತಿಗಳು ಯೂರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹರಡಿದ್ದವು ಎಂದು ಅಭಿಪ್ರಾಯಪಡಲಾಗಿದೆ. ಪರಿಸರದ ಏರಿಳಿತಗಳು, ಮಾನವನ ಆಗಮನ ಮುಂತಾದ ಪ್ರತಿಕೂಲ ಸನ್ನಿವೇಶಗಳಿಗೆ ಹೊಂದಿಕೊಳ್ಳಲಾರದೆ ಇವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿರಬೇಕು. ಮಕಾಕ ಗುಂಪಿಗೆ ಸೇರಿರುವ ಹಲವಾರು ಪ್ರಭೇದಗಳು ಇಂದಿಗೂ ಏಷ್ಯಖಂಡದಲ್ಲಿ ಕಾಣದೊರೆಯುವುವು. ಬಾರ್ಬರಿ ಕೋತಿಗಳ ಉಗಮದ ಬಗ್ಗೆ ನಿರ್ದಿಷ್ಟ ಮಾಹಿತಿಗಳು ದೊರೆತಿಲ್ಲ. ಬಾರ್ಬರಿ ಕೋತಿ ಹಲವಾರು ಪ್ರದೇಶಗಳಲ್ಲಿ ಇದೆಯಾದರೂ ಇದರ ಸಂಖ್ಯೆ ಗಣನೀಯ ಮೊತ್ತದಲ್ಲೇನೂ ಇಲ್ಲ. ಜಿಬ್ರಾಲ್ಟರಿನಲ್ಲಿ 1955ರಲ್ಲಿ ಕೇವಲ 30 ಕೋತಿಗಳಿದ್ದವು. ನಶಿಸುತ್ತಿರುವ ಈ ಪ್ರಭೇದವನ್ನು ಉಳಿಸಿಕೊಳ್ಳಲು ಬ್ರಿಟಿಷ್ ಸರ್ಕಾರ ಇವುಗಳ ಮೇಲೆ ಬಲವಾದ ಮಿಲಿಟರಿ ಕಾವಲನ್ನೇ ಹಾಕಿದೆ. ಬ್ರಿಟಿಷ್ ಸರ್ಕಾರದ ಕಾನೂನಿನಂತೆ ಬಾರ್ಬರಿ ಕೋತಿಯನ್ನು ಕೊಲ್ಲುವುದು ಅಕ್ಷಮ್ಯ ಅಪರಾಧ. ಈ ಕೋತಿಯ ಕೊಲೆಗಾರನಿಗೆ ಮನುಷ್ಯ ಕೊಲೆಮಾಡಿದವನಿಗೆ ನೀಡುವ ಶಿಕ್ಷೆಯನ್ನೇ ನೀಡಲಾಗುತ್ತದೆ.

ಬಾರ್ಬರಿ ಕೋತಿಗಳ ಚಟುವಟಿಕೆಯೆಲ್ಲ ಹಗಲಿನಲ್ಲಿ, ರಾತ್ರಿವೇಳೆಯನ್ನು ಪೊಟರೆಗಳಲ್ಲಿ, ಕಲ್ಲುಬಂಡೆಗಳ ಸಂದುಗಳಲ್ಲಿ ಕಾಲ ಹಾಕುತ್ತಿರುತ್ತವೆ. ಇವು ಚಿಕ್ಕ ಗುಂಪುಗಳಲ್ಲಿ ವಾಸಿಸುತ್ತಿದ್ದು ಇತರ ಕೋತಿಗಳಂತೆಯೇ ಸಮಾಜ ಜೀವನವನ್ನು ನಡೆಸುತ್ತವೆ.

ಇವುಗಳ ಆಹಾರ ಸಮ್ಮಿಶ್ರ ಬಗೆಯದು: ಗಿಡಗಳ ಚಿಗುರುಗಳು, ಎಲೆ ಹಾಗೂ ಹಣ್ಣುಗಳು, ಕೀಟಗಳು, ಚೇಳು ಮತ್ತಿತರ ಚಿಕ್ಕ ಚಿಕ್ಕ ಪ್ರಾಣಿಗಳನ್ನು ತಿನ್ನುತ್ತವೆ. ಇವು ಮನುಷ್ಯನಿಗೆ ಸಾಕಷ್ಟು ಕೀಟಲೆಯನ್ನೂ ಕೊಡುತ್ತವೆ, ತಾವು ವಾಸಿಸುವ ಕಾಡುಗಳ ಹತ್ತಿರದ ಹಳ್ಳಿಗಳಿಗೆ ನುಗ್ಗಿ ಅಲ್ಲಿಯ ಬೆಳೆಗಳನ್ನು ನಾಶಪಡಿಸುತ್ತವಲ್ಲದೆ ಮನೆಗಳಿಗೆ ನುಗ್ಗಿ ಆಹಾರ ಅಥವಾ ಅವಕ್ಕೆ ಕುತೂಹಲ ಹುಟ್ಟಿಸುವ ಯಾವುದೇ ವಸ್ತುವನ್ನು ಕದ್ದೊಯ್ಯುವುದುಂಟು. ಇವುಗಳ ದೃಷ್ಟಿ ಸೂಕ್ಷ್ಮವಾಗಿರುವುದರಿಂದ ವೈರಿಗಳನ್ನು ಸುಲಭವಾಗಿ ಗುರುತಿಸಬಲ್ಲವು. ಆದ್ದರಿಂದ ಇವನ್ನು ಹಿಡಿಯುವುದು ಕಠಿಣ.

ಹೆಣ್ಣು ಗರ್ಭಧಾರಣೆಯಾದ ಅನಂತರ ಸುಮಾರು 210 ದಿನಗಳಲ್ಲಿ ಮರಿ ಹಾಕುತ್ತದೆ. ಮರಿ ಜನಿಸುವಾಗ ರೋಮರಹಿತವಾಗಿರುವುದು. ತಾಯಿ ಅದನ್ನು ಸುಮಾರು ಒಂದು ವರ್ಷದವರೆಗೆ ಸಲಹುತ್ತದೆ. ಮರಿಗಳ ಪಾಲನೆಯಲ್ಲಿ ಗಂಡುಕೋತಿಯ ಸಹಾಯವೂ ಉಂಟು.		(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ